ಪಿಂಡರ್ -
ಕ್ರಿ. ಪೂ. ಸುಮಾರು 518-437. ಗ್ರೀಕ್ ಪ್ರಗಾಥ ಕವಿಗಳಲ್ಲಿ ಅತಿಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿರುವವ. ಬೊಈಷಿಯಾದ ಪ್ರಾಂತದ ತೀಬ್ಸ್ ಪಟ್ಟಣದ ಹತ್ತಿರದಲ್ಲಿದ್ದ ಗ್ರಾಮವೊಂದರಲ್ಲಿ ಹುಟ್ಟಿದ. ತಂದೆ ಡೈಫಾಂಟಸ್ ಪೂರ್ವಜರು ಆದಿ ಕಥಾವಳಿಯಲ್ಲಿ ವಂಶಸ್ಥಾಪಕನೂ ಸಂರಕ್ಷಕ ನಾಯಕನೂ ಆದವನೆಂದೂ ಹೆಸರ್ಗೊಂಡ ಕ್ಯಾಡ್ಮಸ್ ಎಂಬ ಪುರಾಣ ಪುರುಷನ ಸಂತತಿಗೆ ಸೇರಿದವರು. ತನ್ನ ಗೋತ್ರ ಅತ್ಯುನ್ನತವೂ ಧಾರ್ಮಿಕ ಸಂಬಂಧವುಳ್ಳದ್ದೂ ಎಂಬ ಸಂಗತಿಯನ್ನು ಕವಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಕುಲೀನ ಶ್ರೀಮಂತಿಕೆಯ ಮನೋಧರ್ಮ ಇವನ ಕವಿತೆಯಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಅಪಾಲೋ ಇತ್ಯಾದಿ ದೇವತಾ ವರ್ಗವನ್ನು ಕುರಿತು ಪುರಾಣ ಕಥಾವಳಿಯನ್ನೂ ತಮ್ಮ ತಮ್ಮ ಮನೆತನದ ಚರಿತ್ರೆ ಮತ್ತು ಐತಿಹ್ಯವನ್ನೂ ಸಮಾನೀಕರಿಸುವ ಹಕ್ಕು ಕೆಲವೇ ಕೆಲವು ಬುಡಕಟ್ಟುಗಳಿಗೆ ಉಂಟೆಂದೂ ಸ್ಪಾರ್ಟಾ ರಾಷ್ಟ್ರ ಒಪ್ಪಿಕೊಂಡಿತ್ತು. ಅಂಥವುಗಳಲ್ಲಿ ಪಿಂಡರನ ಈಜಿಯೈಡೀ ಬುಡಕಟ್ಟೂ ಒಂದು. ಅಪಾಲೊವಿನ ಪ್ರಧಾನ ಆರಾಧನಾಕ್ಷೇತ್ರವೂ ಭವಿಷ್ಯ ವಾರ್ತೆಯ ಕೇಂದ್ರವೂ ಆಗಿದ್ದ ಡೆಲ್ಭಿಗೆ ಆಗಮಿಸಿದಾಗೆಲ್ಲ ಇವನಿಗೆ ವಿಶೇಷ ಗೌರವ ಸಲ್ಲುತ್ತಿತ್ತು. ಮತರಹಸ್ಯಗಳ ಸ್ವಲ್ಪ ಅರಿವು ಇವನಿಗೆ ಇತ್ತೆಂದು ಜನ ನಂಬಿದ್ದರು. ಈಸ್ಕೆಲಸ್ಸಿಗೂ ಇದೇ ಬಗೆಯ ಪ್ರತೀತಿ ಇತ್ತು. ಹೀಗಾಗಿ ಈತನ ಕವನಗಳಲ್ಲಿ ಅಲ್ಲಲ್ಲಿ ಅತೀ ಕ್ಲಿಷ್ಟವೂ ಗೂಢವೂ ಆದ ಅಭಿಪ್ರಾಯ ಧ್ವನಿತವಾಗಿದೆ.

ಕೊಳಲು ನುಡಿಸುವುದನ್ನು ಪಿಂಡರ್ ಮೊಟ್ಟಮೊದಲಾಗಿ ಬಲತಂದೆಯಾದ ತೀಬ್ಸಿನ ಸ್ಕೋಪೆಲೀಸಸ್ ಬಳಿ ಕಲಿತು, ಆಮೇಲೆ ಆತೆನ್ಸಿಗೆ ಹೋಗಿ ಅಪೊಲೊ ಡೊರಸ್ ಮತ್ತು ಲಾಸಸ್ ಎಂಬ ಸಂಗೀತ ವಿದ್ವಾಂಸರಿಂದ ಉಚ್ಚ ಶಿಕ್ಷಣ ಪಡೆದ. ಇವನ ಕಾವ್ಯವನ್ನು ಭಾವಗೀತವೆಂದು ಕರೆಯುವುದು ಅಷ್ಟೊಂದು ಸರಿಯಲ್ಲ. ಅದು ಹಾಡುಗಬ್ಬ ; ರಚನಾವಿನ್ಯಾಸದ ದೃಷ್ಟಿಯಿಂದ ಅದು ಪ್ರಗಾಥ. ಸಂಗೀತದ ಅಂಶ ಅಲ್ಲಿ ಬಹಳ ಮುಖ್ಯವಾದದ್ದು ; ಭಾವ ಭಾವನೆಗಳ ಸಾಹಿತ್ಯಾಂಶಕ್ಕೆ ಎರಡನೆಯ ಸ್ಥಾನ. ಕಾವ್ಯರಚನೆಯನ್ನು ಪಿಂಡರನಿಗೆ ಹೇಳಿಕೊಟ್ಟ ಗುರು ತೀಬ್ಸಿನ ಕೊರಿನ್ನಾ ಎಂಬ ಕವಯಿತ್ರಿ. ಅವಳೊಂದಿಗೆ ಈತ ಒಮ್ಮೆ ಸ್ಪರ್ಧೆ ಹೂಡಿ ಸೋತುಹೋದನಂತೆ ; ಆದರೆ ಅದೇ ಕೊರಿನ್ನಾ ಈತನೊಡನೆ ಹೋರಾಡಿದ ಮರ್ಟೊ ಎಂಬ ಕವಯಿತ್ರಿಯನ್ನು ಛೀಮಾರಿ ಮಾಡಿದಳಂತೆ. ಇದೊಂದು ದಂತಕಥೆ ಅಷ್ಟೆ. ನಂಬಲರ್ಹವಾದ ಇನ್ನೊಂದು ಸಂಗತಿಯಿದೆ. ಕೊರಿನ್ನಾ ಈತನಿಗೆ ಈ ಬುದ್ಧಿವಾದ ಕೊಟ್ಟಳಂತೆ. ' ಕೈಯಿಂದ ಬಿತ್ತು, ಚೀಲದಿಂದ ಬಿತ್ತಬೇಡ '. ಪಿಂಡರನ ಕವಿತ್ವಕ್ಕೆ ಅತ್ಯಾಲಂಕಾರ ಭೂಷಣವೂ ಹೌದು, ದೋಷವೂ ಹೌದು-ಎಂಬುದನ್ನು ಈ ಟೀಕೆ ಎತ್ತಿ ಹೇಳುತ್ತದೆ.

ರಾಜಕೀಯ ಲಲಿತಕಲೆ ಸಂಸ್ಕøತಿ ಪ್ರಭಾವ ಈ ಎಲ್ಲದರಲ್ಲೂ ಗ್ರೀಸಿನ ಇತರ ರಾಷ್ಟ್ರಗಳಿಗಿಂತ ಎಷ್ಟೋ ಮುಂದಿದ್ದ ಆತೆನ್ಸು ಪ್ರತಿಭಾಶಾಲಿಗಳಿಗೆಲ್ಲ ಭಾರಿ ಆಕರ್ಷಣೆ ಒಡ್ಡಿತ್ತು. ಪಿಂಡರ್ ಕೂಡ ಅಲ್ಲಿಗೆ ಹೋಗಿ ನೆಲೆಸಿದ. ಕೃತಿರಚನೆಗೆ ತೊಡಗಿದ. ಹಾಡುಗಬ್ಬ ಬರಿ ಸಂಗೀತ ಮತ್ತು ಸಾಹಿತ್ಯವಾಗಿರದೆ ಮೇಳ ನೃತ್ಯವನ್ನೂ ಒಳಗೊಂಡಿತ್ತು. ನಾನಾ ಬಿಡಿ ಅಂಗಗಳ ಯುಕ್ತ ಆಯ್ಕೆ, ಅವುಗಳ ಪರಸ್ಪರ ಸಂಬಂಧದ ವ್ಯವಸ್ಥೆ, ಸಕ್ರಮದಲ್ಲಿ ಅವುಗಳನ್ನು ಸಂಯೋಜಿಸುವಿಕೆ, ವೃಷ್ಟಿಯ ಅಂದ ಚಂದ ಮರೆಯಾಗದಂತೆ ಸಮಷ್ಟಿ ಲಾವಣ್ಯದ ಸಾಧನೆ-ಹೀಗೆ ಸಂಕೀರ್ಣವೂ ಬಹು ಮುಖ್ಯವುಳ್ಳದ್ದು. ಅತ್ಯಂತ ಹೃದಯಂಗಮವೂ ಆದ ಕಲೆಯೆನಿಸಿಕೊಂಡು ವಿಕಾಸ ಹೊಂದಿದ ಪ್ರಗಾಥ ಪಿಂಡರನ ವಶಕ್ಕೆ ಬಂದುದು ದೇವಕಮ್ಮಾರ ಹೆಫೀಸ್ಟಿಯನ್ ತಯಾರಿಸಿದ ಗುರಾಣಿ ಭರ್ಜಿ ಕವಚ ಖಡ್ಗಗಳು ವೀರಾಳು ಅಕಿಲೀಸನಿಗೆ ಒದಗಿ ಬಂದಂತೆ ಆಯಿತು. ಮತ್ತಾವ ಹಿರಿಯ ಕವಿಯೂ ಮುಟ್ಟಲಾರದ ಮಟ್ಟಕ್ಕೆ ಅದನ್ನು ಪಿಂಡರ್ ಎತ್ತಿ ನಿಲ್ಲಿಸಿದ ; ಪ್ರಪಂಚದ ಶಾಶ್ವತತಮಶ್ರೇಷ್ಠ ಕವಿಗಳ ಗಡಣದ ಮೊದಲನೆಯ ಪಂಕ್ತಿಯಲ್ಲಿ ತನ್ನ ಪೀಠವನ್ನು ಗಳಿಸಿಕೊಂಡ.

ಕಲಾವಂತಿಕೆಯಲ್ಲೂ ಪ್ರಖ್ಯಾತಿಯಲ್ಲೂ ಪಿಂಡರನ ಪ್ರಗತಿ ವೇಗವೇಗದಿಂದ ಆದಂತೆ ಕಾಣಬರುತ್ತದೆ. ಕ್ರಿ. ಪೂ. 498 ರಲ್ಲಿ ತೆಸೆಲಿಯ ಅಲ್ಯೂಯಡೀ ಎಂಬ ಧನಿಕ ರಾಜವಂಶದವರಿಂದ ಅವನಿಗೊಂದು ಕರೆ ಬಂತು. ಆ ಮನೆತನದ ಒಬ್ಬ ಬಾಲಕ ಓಟದ ಜೋಡಿ ಪಂದ್ಯದಲ್ಲಿ ವಿಜಯ ಹೊಂದಿದ ; ಅದನ್ನು ಕೊಂಡಾಡುವ ಪ್ರಗಾಥ ಪಿಂಡರಿನಿಂದ ರಚಿತವಾಯಿತು. ಅಲ್ಲಿಂದ ಮುಂದೆ ಈಜೀನಾ ಖಾರಿಯ ದಂಡೆಯಲ್ಲಿದ್ದ ಹಲವು ಮೇಲ್ವರ್ಗದ ವರ್ತಕ ಶ್ರೀಮಂತರು ಅವನ ಉದಾರ ಆಶ್ರಯದಾತರಾದರು. ಗ್ರೀಸಿನ ನಾನಾ ಪ್ರಮುಖ ನಗರಗಳು ಅವನನ್ನು ಬರಮಾಡಿಕೊಂಡು ಸನ್ಮಾನಿಸಿದವು. ರೋಡ್ಸ್, ಟೆನಿಡಾಸ್, ಕಾರಿನ್ತ್, ಮ್ಯಾಕಿಡಾನ್, ಕೈರೀನಿ, ಅಕ್ರಗಾಸ್, ಸೈರಕ್ಯೂಸ್ ಮುಂತಾದ ದೇಶಗಳಿಗೆ ಭೇಟಿಕೊಟ್ಟು ಭಾರಿ ಕೀರ್ತಿವಂತನಾದ. ಉನ್ನತ ಕುಲದವರೂ ಅಲೆಕ್ಸಾಂಡರ್, ಹಯರೊ, ತೇರೊ, ಅರ್ಕಿಸಿಲಾಉಸ್ ಮೊದಲಾದ ಅರಸರೂ ಸಂತುಷ್ಟಿಯಿಂದ ಇವನ ಸ್ನೇಹಿತರಾದರು. ಅದೇ ವಿಧದ ಯಶಸ್ಸನ್ನು ಆರ್ಜಿಸಿದ ಇನ್ನೊಬ್ಬ ಪ್ರಗಾಥಕವಿ ಸಿಮೊನಿಡೀಸ್. ಆದರೆ ಅವನಿಗೂ ಇವನಿಗೂ ಒಂದು ದೊಡ್ಡ ವ್ಯತ್ಯಾಸ : ಹಣವೀಯುವವರಿಗೆ ಕಾವ್ಯ ಕಟ್ಟಿಕೊಡುವ ಲೇಖಕ ತಾನೆಂದು ಸಿಮೊನಿಡೀಸನ ಸಂತೃಪ್ತಿ. ಇವನ ಅಭಿಪ್ರಾಯವಾದರೊ ಹಣ ಕೊಡುವವರಿಗೆ ತಾನು ಸರಿಸಮಾನ, ಪರಂಪರೆ ಕುಲ ಹಿರಿಮೆ ಖ್ಯಾತಿ ಯಾವುದರಲ್ಲೂ ಅವರಿಗಿಂತ ತಾನೆಂದೂ ಕಡಿಮೆಯಲ್ಲ-ಎಂದು. ದರ್ಪದ ಈ ಮನೋಭಾವ ಇವನಲ್ಲಿ ಕೊನೆಯವರೆಗೂ ಸ್ಪುಟವಾಗಿತ್ತು, ಸುಟಿಯಾಗಿತ್ತು.

	ರಾಜಕೀಯದಲ್ಲಿ ಈತ ತೀಬ್ಸಿನ ಅವಿಚ್ಛಿನ್ನ ಅನುಯಾಯಿ : ಮತಧರ್ಮದಲ್ಲಿ ಡೆಲ್ಫಿ ಪಂಥಕ್ಕೂ ಅಪಾಲೊವಿಗೂ ಶ್ರದ್ಧೆಯ ಭಕ್ತ. ಆತೆನ್ಸು ತನಗೆ ಮಹೋಪಕಾರ ಮಾಡಿದರೂ ಮಾಡುತ್ತಿದ್ದರೂ ಪರ್ಷಿಯದೊಡನೆ ಘೋರ ಯುದ್ಧ ಪ್ರಾರಂಭವಾದಾಗ ಈತ ತೀಬ್ಸಿನಂತೆ ತಟಸ್ಥನಾಗಿಯೇ ನಿಂತ. ಶಾಂತಿ ನಿಷ್ಪಾಕ್ಷಿಕತೆಗಳನ್ನು ಮೆಚ್ಚುವ ವಾಕ್ಯಗಳನ್ನು ಬರೆದ. ಆಮೇಲೆ ತೀಬ್ಸು ಪರ್ಷಿಯಾದ ಕಡೆಗೆ ಸೇರಿಬಿಟ್ಟಿತು. ಆಗ ಈತನಿಂದ ಒಂದು ಪ್ರತಿಭಟನಾ ವಚನವೂ ಹೊರಡಲಿಲ್ಲ. ಆದರೂ ಈ ಪ್ರಸಂಗವನ್ನು ಉಪಯೋಗಿಸಿಕೊಂಡು ಆತೆನ್ಸನನ್ನು ಹೊಗಳಿ ಧಾರಾಳವಾಗಿ ಬರೆದ. ಇದಕ್ಕಾಗಿ ತೀಬ್ಸು ಇವನಿಗೆ ಜುಲ್ಮಾನೆ ಹಾಕಿತಂತೆ. ಆತೆನ್ಸು ಈತ ತೆತ್ತ ದ್ರವ್ಯದ ಎರಡರರಷ್ಟನ್ನು ಪರಿಹಾರವಾಗಿ ನೀಡಿತು. ಇವನ ಶಿಲಾ ಪ್ರತಿಮೆ ಸ್ಥಾಪಿಸುವ ಏರ್ಪಾಡನ್ನೂ ಮಾಡಿತು. ಪ್ರಾಯಶಃ ಇವನ ಮರಣಾನಂತರ ಅದು ನೆರವೇರಿತು. ಆತೆನ್ಸಿನ ಸಾಂಸ್ಕøತಿಕ ಉದಾತ್ತತೆಗೆ ಇದೊಂದು ಒಳ್ಳೆಯ ನಿದರ್ಶನ. ಈತನ ಜೀವನ ಯಾವ ಪ್ರಕ್ಷುಬ್ಧತೆಗೂ ಈಡಾಗದೆ ಸಮತೋಲಸ್ಥಿತಿಯಲ್ಲಿ ಮುಂದುವರೆಯಿತು. ಕ್ರಿ. ಪೂ. 437 ರಲ್ಲಿ ಈತ ಆರ್ಗಾಸಿನಲ್ಲಿ ನಿಧನನಾದ. 

 	ಮಹಾಕವಿಯೊಬ್ಬನಿಗೆ ಸಲ್ಲತಕ್ಕ ಐಹಿಕ ಆಮುಷ್ಮಿಕ ಮರ್ಯಾದೆಗಳಲ್ಲಿ ಬಹಳ ಭಾಗ ಈತನಿಗೆ ದಕ್ಕಿತು. ಬದುಕಿದ್ದಾಗ, ನಾನಾ ಪ್ರಭುವರ್ಯರಿಗೆ ಪ್ರೀತಿಯ ಅತಿಥಿಯಾದದ್ದು ಹಾಗಿರಲಿ, ಡೆಲ್ಫಿಗೆ ಅರ್ಪಿಸಿದ ಕಾಣಿಕೆ ನೈವೇದ್ಯ ಇತ್ಯಾದಿಗಳಲ್ಲಿ ಒಂದು ಪಾಲನ್ನು ಪೂಜಾರಿವರ್ಗ ಇವನಿಗಾಗಿ ಮೀಸಲಿಡುತ್ತಿತ್ತು. ಈತನ ಪ್ರೇತ ಅಪಾಲೊವಿನ ದೇವಭೋಜನಕ್ಕೆ ವರ್ಷವರ್ಷವೂ ಬರುತ್ತದೆಂದು ಅವರು ನಂಬಿದ್ದರು. ಸುಮಾರು 600 ಸಂವತ್ಸರಗಳ ತರುವಾಯ ಪಾಸೇನಿಯಸ್ ಎಂಬ ಪ್ರವಾಸಿಗ ಡೆಲ್ಫಿಗೆ ಹೋದಾಗ ಅವನಿಗೆ ಒಂದು ಹಳೆಯ ಕಬ್ಬಿಣದ ಕುರ್ಚಿಯನ್ನು ತೋರಿಸಿದರು. ಅದರಲ್ಲಿ ಕುಳಿತುಕೊಂಡು ಪಿಂಡರ್ ಅಪೊಲೊ ಸ್ತೋತ್ರಗಳನ್ನು ಗಾಯನ ಮಾಡುತ್ತಿದ್ದನಂತೆ. ಡೆಲ್ಫಿಯ ಅತ್ಯಮೂಲ್ಯ ಪದಾರ್ಥಗಳಲ್ಲಿ ಅದೂ ಒಂದೆಂದು ಎಲ್ಲರ ಪರಿಭಾವನೆ. ತೀಬ್ಸಿನಲ್ಲಿ ಹುಟ್ಟಿ ಬಂದರೇನು, ಆತೆನ್ಸಿನಲ್ಲಿ ಬಾಳಿ ಬದುಕಿದರೇನು, ಪಿಂಡರ್ ಸಮಸ್ತ ಗ್ರೀಸಿನ ರಾಷ್ಟ್ರಕವಿ ಎಂಬ ಭಾವನೆ ಎಲ್ಲರಲ್ಲೂ ನಿಶ್ಚಲವಾಗಿತ್ತು. ಲ್ಯಾಕಿಡೆಮನಿಯನ್ನರ ರಾಜ ತೀಬ್ಸ್ ನಗರವನ್ನು ಗೆದ್ದು ಅಗ್ನಿಗೆ ಆಹುತಿ ಕೊಟ್ಟಾಗ, ಪಿಂಡರನ ಗೃಹದ ಬಾಗಿಲ ಮೇಲೆ ಯಾರೋ ಕವಿ ಪಿಂಡರನ ಮನೆಯನ್ನು ಸುಡಬೇಡಿ ಎಂದು ಬರೆದಿದ್ದರಂತೆ. ಇದರಿಂದ ಆ ಮನೆ ಉಳಿಯಿತಂತೆ. ಈ ಕಥೆಯ ನಿಜಾಂಶ ಸಂದೇಹಗ್ರಸ್ತ. ಆದರೆ ಅಲೆಕ್ಸಾಂಡರನಿಗೆ ಸಂಬಂಧಿಸಿದ ಇನ್ನೊಂದು ಕಥೆಗೆ ಹೆಚ್ಚು ಪುರಾವೆಗಳುಂಟು. ಕ್ರಿ. ಪೂ. 335 ರಲ್ಲಿ ಅಲೆಕ್ಸಾಂಡರ್ ತೀಬ್ಸನ್ನು ನಾಶಗೈದಾಗ ಅವನು ಉಳಿಸಿದ್ದು ಮೂರು : 1. ತನ್ನ ಸೈನಿಕರಿಗಾಗಿ ಕ್ಯಾಡ್ಮಿಯ ಎಂಬ ಒಳದುರ್ಗ 2. ದೇವಾಲಯಗಳು, ಪುಣ್ಯಸ್ಥಳಗಳು 3. ಪಿಂಡರನ ಮನೆ. ತೀಬ್ಸಿನ ಪ್ರಜೆಗಳನ್ನು ಆತ ಗುಲಾಮರಾಗಿ ಮಾರಿಬಿಟ್ಟ, ಮೂರು ಗುಂಪುಗಳು ವಿನಾ : 1. ಪೂಜಾರಿ ಪೂಜಾರಿಣಿಯರು, 2. ತನ್ನ ಮತ್ತು ತನ್ನ ತಂದೆಯ ದೂರದ ಸಂಬಂಧಿಗಳು. 3. ಪಿಂಡರನ ಸಂತತಿಯವರು. ಮರುಭೂಮಿಯಲ್ಲಿದ್ದ ದೇವೋತ್ತಮ ಜ್ಯೂಸನ ಗುಡಿಯ ಅರ್ಚಕರು ಪಿಂಡರನ ಒಂದು ಕವಿತೆಯನ್ನು ಚಿನ್ನದ ಅಕ್ಷರಗಳಲ್ಲಿ ತಮ್ಮ ಗುಡಿಯ ಮೇಲೆ ಬರೆಯಿಸಿಕೊಂಡಿದ್ದರಂತೆ. 

 	ಗೀತಕವಿಯಾಗಿ ಪಿಂಡರ್ ಪ್ರದರ್ಶಿಸಿದ ಬಹುಮುಖ ಸಾಮಥ್ರ್ಯವೂ ವಿಧವಿಧದ ಶಕ್ತಿಯೂ ಅನ್ಯಾದೃಶ ಸ್ವಂತಿಕೆಯೂ ದಿಟವಾಗಿ ಆಶ್ಚರ್ಯಕರ. ಈತನ ಅಗಾಧ ಲೇಖನಗಳನ್ನು ಹೆಲನಿಸ್ಟಿಕ್ ಯುಗದ ಪಂಡಿತಲಾಕ್ಷಣಿಕರೂ 17 ಸಂಪುಟಗಳಾಗಿ ವಿಂಗಡಿಸಿದರು. ಅವುಗಳ ತಪಶೀಲು ಹೀಗಿದೆ : ಸ್ತ್ರೋತ್ರಗಳು, ಪಿಯಾನ್ (ಸಂಕೀರ್ತನೆ), ಡಿತಿರ್ಯಾಂಬ್ (ಡಯ್ಯಾನೀಸಸ್ ಸ್ತುತಿ)-2, ಪ್ರಾಸೊಡಿಯಾ (ಮೆರವಣಿಗೆ)-2, ಪಾರ್ತಿನಿಯಾ (ಕನ್ಯೆಯರ ಮೆರವಣಿಗೆ ಗೀತ)-3, ನೃತ್ಯಗೀತ-2, ಪ್ರಶಂಸೆ, ಶೋಕಗೀತ, ಎಪಿನಿಕಿಯಾ (ವಿಜಯಗೀತ)-4, ಇಷ್ಟೇ ಅಲ್ಲದೆ ಹಬ್ಬದ ಹಾಡು, ಪ್ರೇಮಗೀತ ಮುಂತಾದ ಇತರ ಬಗೆಯ ಕಾವ್ಯಗಳನ್ನೂ ಪಿಂಡರ್ ಬರೆದಿದ್ದನೆಂದೂ ಊಹಿಸುವುದಕ್ಕೆ ಉಪಲಬ್ಧವಾಗಿರುವ ಚೂರುಪಾರು ಇಂಬು ಕೊಡಬಲ್ಲವು. ಆದರೆ ಹೆಚ್ಚಿನ ಮಾಹಿತಿ ಏನೂ ದೊರಕುವುದಿಲ್ಲ. ವಿಜಯಗೀತೆಗಳ ಹೊರತು ಮಿಕ್ಕೆಲ್ಲವನ್ನೂ ಕಾಲವೆಂಬ ಮಾರಿ ಭಕ್ಷಿಸಿ ಶತಮಾನಗಳು ಕಳೆದು ಹೋಗಿವೆ. ಆದ್ದರಿಂದ ಪಿಂಡರನ ಕವಿತ್ವವೆಂದು ಲೋಕದ ಮುಂದೆ ಇರುವುದು ಎಪಿನಿಕಿಯಾ ಒಂದೇ.

	44 ಪ್ರಗಾಥಗಳಿಂದ ಕೂಡಿದ ಎಪಿನಿಕಿಯಾವನ್ನು ನಾಲ್ಕು ಭಾಗವಾಗಿ ವಿಭಜಿಸುವುದು ಸಾಂಪ್ರದಾಯಿಕ. ದೇಹವನ್ನು ಆಲಕ್ಷ್ಯ ಮಾಡದೆ ನಿರೋಗವಾಗಿಯೂ ಬಲಿಷ್ಟವಾಗಿಯೂ ಮನೋಹರವಾಗಿಯೂ ಬೆಳೆಸಿಕೊಳ್ಳುವುದು ಪುರಾತನ ಗ್ರೀಕರಿಗೆ ಬರಿ ಕರ್ತವ್ಯವಾಗಿರಲಿಲ್ಲ, ಮತಧರ್ಮದ ಅಂಗವೂ ಆಗಿತ್ತು. ವ್ಯಾಯಮ ಶಾಲೆಯಿಲ್ಲದ ಊರು ಇರಲಿಲ್ಲ. ವ್ಯಾಯಾಮ ಆಚರಿಸದ ಜನ ಗೊಚರಿಸುತ್ತಿರಲಿಲ್ಲ. ಹೆಂಗಸರಿಗೂ ವ್ಯಾಯಾಮ ನಿಬದ್ಧವಾಗಿತ್ತು. ಮುದುಕರೂ ಕೂಡ ಬಾಲಕರೊಂದಿಗೆ ಕುಸ್ತಿ ಮುಂತಾದ ಕ್ರೀಡೆಗಳಲ್ಲಿ ಪಾತ್ರ ವಹಿಸುತ್ತಿದ್ದರು. ಹುರುಪು ಹೆಚ್ಚಿಸುವುದಕ್ಕೆ ಸ್ಪರ್ಧೆಗಳು ಏರ್ಪಾಡಾಗುತ್ತಿದ್ದುವು. ಸ್ಥಳೀಯ ಪ್ರಾಂತೀಯ ಸ್ಪರ್ಧೆಗಳ ವಿಚಾರ ಬೇಡ, ಎಲ್ಲ ರಾಷ್ಟ್ರಗಳಿಗೂ ಇಡೀ ಗ್ರೀಸಿಗೂ ಅನ್ವಯಿಸಿದ ಮಹಾ ಮೇಲಾಟಗಳು ನಾಲ್ಕು ಜರುಗುತ್ತಿದ್ದವು. 1. ಒಲಿಂಪಿಯ ಎಂಬಲ್ಲಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದುದು ; ದೇವದೇವನಾದ ಜ್ಯೂಸನ ಆರಾಧನೆಯ ಸಮಯದಲ್ಲಿ ಗೆದ್ದವರಿಗೆ ಕೊಡುತ್ತಿದ್ದ ಬಹುಮಾನ ಕಾಡು ಆಲೀವ್ ಎಲೆಗಳ ತಲೆಸಿಂಬಿ. 2. ಡೆಲ್ಪಿಯ ಸಮೀಪ ಪೈತಿಯಾ ಎಂಬ ಹೆಸರಿನಿಂದ ನಡೆಯುತ್ತಿದ್ದ ಪೈಪೋಟಿ. ದೇವತೆ ಅಪೊಲೊವಿನ ಹೆಸರಿನಲ್ಲಿ ಕೊಡುತ್ತಿದ್ದ ಬಹುಮಾನ ಲಾರೆಲ್ ಎಲೆಗಳ ಸಿಂಬಿ. ಅದು ನಾಲ್ಕು ವರ್ಷಕ್ಕೊಮ್ಮೆ. 3. ನೀಮಿಯಾ ಎಂಬಲ್ಲಿ ಜ್ಯೂಸ್ ಮಹದೇವನಿಗಾಗಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದದ್ದು. ಬಹುಮಾನ ಪೈನ್ ಗರಿಗಳ ಸಿಂಬಿ. 4. ಕಾರಿನ್ ಭೂಕಂಪದಲ್ಲಿ ಸಮುದ್ರದೇವ ಪೊಸಿಡನ್ನನ ಪೂಜೆಗಾಗಿ ನೆಡೆಯುತ್ತಿದ್ದದ್ದು ; ಎರಡು ವರ್ಷಕ್ಕೊಮ್ಮೆ. ಬಹುಮಾನ ಪಾರ್‍ಸ್ಲಿ ಸಸ್ಯದ ಸಿಂಬಿ. ಪಿಂಡರನ 44 ವಿಜಯ ಗೀತೆಗಳು ಹೀಗೆ ವರ್ಗೀಕರಣ ಹೊಂದುತ್ತವೆ ; ಒಲಿಂಪಿಯ-14, ಪೈತಿಯಾ-12, ನೀಮಿಯಾ-7, ಕಾರಿನ್ಸ್ ಭೂಕಂಪ-11, ಕ್ರಿ. ಪೂ. 502 ರಿಂದ 437 ರವರೆಗೆ ನಡೆದ ಪಂದ್ಯಗಳೇ ಪಿಂಡರನ ಕಾವ್ಯ ವಿಷಯ. ಜಯಶಾಲಿಗಳು ಗ್ರೀಸು ದಕ್ಷಿಣ ಇಟಲಿ ಸಿಸಿಲಿ ಈಜೀನಾ ಕೊಲ್ಲಿ ಆಫ್ರಿಕಾ-ಹೀಗೆ ಆಗ ಪರಿಚಿತವಾಗಿದ್ದ ಭೂಭಾಗವೆಲ್ಲಕ್ಕೂ ಸೇರಿದವರು. ಪಿಂಡರನಿಗೆ ಸಂಕುಚಿತ ಪ್ರವೃತ್ತಿ ಇರಲೇ ಇಲ್ಲ. ಆತ ವಿಶ್ವ ಸೌಹಾರ್ದದವ, ವಿಶ್ವಪ್ರೇಮಿ, ನೈಜ ಕವಿ. 

ಇದೇನು, ಕುದುರೆ ಕಾಸ್ತಾರ ಓಟ, ಈಟಿ ಎಸೆತ, ಮುಷ್ಟಿ ಕಾಳಗ, ಎಲೆ ಸಸ್ಯ ಇತ್ಯಾದಿ ಸಾಮಾನ್ಯ ನೀರಸ ವಿಚಾರಗಳಿಂದ ಮಹಾಕಾವ್ಯ ಕಟ್ಟುವುದು ಸಾಧ್ಯವೇ ? ಹೀಗೆಂದು ಆಶ್ಚರ್ಯಪಡಬಹುದು. ಶಕ್ಯವೆಂದು ಪಿಂಡರ್ ಪ್ರತ್ಯಕ್ಷ ಪ್ರಮಾಣ ನೀಡಿದ್ದಾನೆ. ಅಷ್ಟೇಕೆ, ಇವನ ಎರಡು ಪರಮೋತ್ಕøಷ್ಟ ಪ್ರಗಾತಗಳು ಹೇಸರಗತ್ತೆ ಪಂದ್ಯವನ್ನು ಕುರಿತವು, ರೀತಿ ಮುಖ್ಯ ವಿಷಯವಲ್ಲ ಎಂಬ ಸೂತ್ರಕ್ಕೆ ಇದು ಸಮರ್ಪಕ ಉದಾಹರಣೆ. ಮಲ್ಲಯುದ್ಧ ಕುದುರೆ ಪಂದ್ಯ ಹಯರೋವಿನ ಔತಣ, ಹೆರಾಕ್ಲೀಸನ ಸಾಹಸ-ವಿಷಯ ಯಾವುದೇ ಆಗಿರಲಿ ಅದನ್ನು ಭಾವಿಸುವ ಕವಿ ಹೃದಯ ಸಹಜಾಸಕ್ತಿಯಿಂದ ಕುಣಿದಾಡುತ್ತದೆ. ಕವಿಯ ಪ್ರತಿಕ್ರಿಯೆ ಬರಿ ಚಿಂತನೆಯೂ ಅಲ್ಲ. ಬರಿ ರಾಗೋದ್ರೇಕವೂ ಅಲ್ಲ. ಸುಂದರ ಪ್ರತಿಮೆಗಳನ್ನು ನಿರ್ಮಿಸುವ ಸೃಜನ ಕಂಪನ, ರೂಪಕಾಲಂಕಾರ ಕವಿಯ ವಿಶಿಷ್ಟ ಸ್ವತ್ತು ಕಳಪೆ ವಸ್ತುವಿಗೂ ಅದರ ಮೂಲಕ ಕಾಂತಿ ಲಭಿಸುತ್ತದೆ. ಚಳಿಗಾಳಿಗೆ ಬೆಚ್ಚನೆಯ ಮದ್ದು ಎಂದು ಮೇಲುಡಪನ್ನು ಕವಿ ಬಣ್ಣಿಸುತ್ತಾನೆ. ನೆಗೆತ ದೋಣಿಯಾನ ನೇಗಿಲು ಕೃಷಿ ಬಾಣ ಬಿಡುವಿಕೆ ಚೂರಿಯ ಮಸೆತ ಮಧ್ಯ ಸಿದ್ಧತೆ ಮೊದಲಾದ ಸಾಮಾನ್ಯ ವ್ಯಾಪಾರಗಳನ್ನು ಸಾದೃಶ್ಯದ ಮೂಲಕ ರಸವತ್ತಾಗಿಸುತ್ತಾನೆ. ಅಪೂರ್ವ ಹೋಲಿಕೆಯೂ ಕವಿಗೆ ಸ್ವಾಭಾವಿಕವಾಗಿ ಬರುತ್ತದೆ. ಒಲಿಂಪಿಯಾ ಸಮಾರಂಭ ಹಬ್ಬಗಳ ಕಿರೀಟ, ಸಿಹಿ ನೀರಿನಂತೆ ಅದು ಅತ್ಯುತ್ತಮ, ಹೊನ್ನಿನಂತೆ ಅದರ ಹೊಳಪು ಮಧ್ಯಾಹ್ನದ ಸೂರ್ಯನಂತೆ ಅದು ಉಜ್ಜಲ. ಮೇಲಾಗಿ ಕವಿ ನಾದಪಟು. ಹಾಡಿದಲ್ಲದೇ ಮಾಡಿದಲ್ಲದೆ ಈ ಹೇಳಿಕೆಯ ವೈಭವ ಮಂದಟ್ಟಾಗದು. ಇತರರ ಕಾವ್ಯವಾಚನವನ್ನು ಆಲಿಸಿ ಕವಿ ಬೇಸರಗೊಳ್ಳುತ್ತಿದ್ದನಂತೆ. ಕವಿಯ ಪ್ರಗಾಥಗಳನ್ನು ಕೇಳಿದ ಯಾತ್ರಿಕರು ತಮ್ಮ ತಮ್ಮ ಊರಿಗೆ ಹಿಂದಿರುಗಿದಾಗ ಪ್ರಾಯಶಃ ಅವರ ಆಂತರ್ಯದಲ್ಲಿ ಅನುರಣನ ಮಾಡುತ್ತಿದ್ದದ್ದು ಎರಡು : ವಿಜಯಿಗಳ ನಾಮಾಂಕಿತ ಹಾಗೂ ಕೃತಿಯ ಮಟ್ಟುಗಳು. 

ಬುದ್ಧಿವಂತರಲ್ಲದವರಿಗೆ ಪಿಂಡರ್ ಸುಲಭವಾಗಿ ಅರ್ಥವಾಗುತ್ತಿರಲಿಲ್ಲ : ಕಾರಣ ಈತ ಬಳಸಿದ ಭಾಷೆ ಡೋರಿಯನ್ ಪ್ರಾಂತೀಯ ಭಾಷೆ. ಅಲ್ಲದೆ ವ್ಯಾಕರಣ ವಿರುದ್ಧವಾದ ಸ್ಥಾನಪಲ್ಲಟ, ತಿರುಗುಮುರುಗು ವಿನ್ಯಾಸ, ಅಪರಿಚಿತ ಪದಕ್ರಮ ಮುಂತಾದ ಲಕ್ಷಣಗಳಿಂದ ಕಾವ್ಯಸರಣಿ ಕಷ್ಟಕರವಾಗುತ್ತಿತ್ತು. ಈಸ್ಕಿಲಸ್ಸಿಗಿಂತ ಈತ ಮೂರು ವರ್ಷ ಕಿರಿಯವನಾದರೂ ದೃಷ್ಟಿಯಲ್ಲಿ 34 ವರ್ಷ ಹಿರಿಯವನಾದ ಸಿಮೊನಿಡೀಸನ ಹಿಂದಿನ ತಲೆಮಾರಿಗೆ ಸೇರಿದವ-ಎಂದು ವಿಮರ್ಶಕರು ತೀರ್ಪು ಕೊಟ್ಟಿದ್ದಾರೆ. ಪಿಂಡರ್ ನಿಜವಾಗಿ ಪ್ರಾಚೀನ ಕವಿ. 

ಪಿಂಡರ್ ಅಪ್ಪಟ ಕವಿ, ಕವಿಯಲ್ಲದೆ ಬೇರೆ ಏನೂ ಅಲ್ಲ. ಹಾಡುಗಾರಿಕೆಯೇ ಇವನ ಚಿಂತನೆ ಎಂಬ ಅಭಿಪ್ರಾಯವಿದೆ. ಬಲು ಮಟ್ಟಿಗೆ ಅದು ನಿಜ. ಆದರೆ, ಆಲೋಚನೆಯಾಗಲಿ ತತ್ತ್ವ ದರ್ಶನವಾಗಲಿ ಇವನಲ್ಲಿ ಕಡಿಮೆ ಎಂದು ತಿಳಿದುಕೊಂಡರೆ ತಪ್ಪಾದೀತು. ಧಾರ್ಮಿಕ ವಿಚಾರಗಳೆಂದರೆ ಇವನಿಗೆ ರಾಗ ತೀವ್ರತೆಯ ಉತ್ಸಾಹ. ಹೆರಾಕ್ಲೀಸ್, ಆಕಿಲೀಸ್, ಜೇಸನ್, ಪರ್ಸಿಯಸ್, ಕ್ಯಾಡ್ಮಸ್ ಮತ್ತು ಅವನ ಹೆಣ್ಣು ಮಕ್ಕಳು ಮುಂತಾದ ಪೌರಾಣಿಕ ಘನ ವ್ಯಕ್ತಿಗಳಿಂದ ಇವನ ಮನಸ್ಸು ತುಂಬಿಕೊಂಡಿರುತ್ತಿತ್ತು. ಅವುಗಳ ಮನನ ಮಂಥನ ಲಲಿತ ಸುಧಾರಣೆ ಇವೇ ಇವನ ಮಿದುಳಿಗೆ ಕೆಲಸ. ಅಲ್ಲಲ್ಲಿ ಸೂಕ್ತ ಬದಲಾವಣೆ ಮಾಡಲು ಈತ ಅಂಜಲಿಲ್ಲ, ಫೀಬಸ್ ಅಪೊಲೊವಿಗೆ ಕೊರೋನಿಸ್ ಎಂಬ ಅಪ್ಸರೆ ನಲ್ಲೆಯಾಗಿದ್ದಳು. ಆದರೆ, ಗುಟ್ಟಾಗಿ ಅನ್ಯ ಪ್ರಿಯನೊಬ್ಬನಿಗೆ ಒಲವು ತೋರುತ್ತಿದ್ದಳು. ಆಕೆಯ ದ್ರೋಹವನ್ನು ಕಾಡು ಕಾಗೆಯೊಂದು ಕಂಡುಹಿಡಿದು ಅಪಾಲೊವಿಗೆ ತಿಳಿಸಿತು. ಇದು ಹಳೆಯ ಕಥೆ. ಪಿಂಡರನ ಬುದ್ಧಿಗೆ ಅದು ಸರಿ ಎಂದು ಕಾಣಬರಲಿಲ್ಲ. ಕೊರೋನಿಸ್ಸಳ ಅಪಚಾರ ದೇವತೆಯ ಸರ್ವವೀಕ್ಷಕ ತಿಳಿವಳಿಕೆಗೆ ತಾನಾಗಿ ಗೋಚರವಾದಂತೆ ಮಾರ್ಪಡಿಸಿಬಿಟ್ಟ. ಮೂಲ ಕಥಾವಳಿಯ ಆತಾರ್ಕಿಕ ಅಂಶಗಳನ್ನು ತಿದ್ದಿ ಮನವೊಪ್ಪುವಂತೆ ಮಾಡುವ ಕಾರ್ಯ ಡೆಲ್ಫಿ ಚಳವಳಿಯ ಮುಖ್ಯ ಭಾಗವಾಗಿತ್ತು. ಪಿಂಡರನ ದರ್ಶನ ಆಶಾವಾದಕ್ಕೂ ನಿರಾಶಾವಾದಕ್ಕೂ ನಡುವಣ ಮಧ್ಯಕ್ಷೇತ್ರದ್ದು. ಪ್ರಾಸಂಗಿಕವಾಗಿ ನೀತಿಬೋಧೆ ಮಾಡುವುದು ಪಿಂಡರನ ಕಾವ್ಯಕ್ಕೆ ಒಂದು ಬಗೆಯ ಭೂಷಣ. ಮೇಲ್ಮಟ್ಟದ ಸತ್ಪುರುಷನ ಆದರ್ಶವನ್ನು ನಮ್ಮ ಮುಂದೆ ಆತ ಎತ್ತಿ ಹಿಡಿಯುತ್ತಾನೆ. ಮನುಷ್ಯ ಉನ್ನತ ವಂಶದವನಾಗಿ ಬಲಿಷ್ಠನೂ ಧೈರ್ಯಶಾಲಿಯೂ ಆಗಿರತಕ್ಕದ್ದು. ಮನ ವಚನ ಕಾಯಗಳಿಂದ ದುಡಿಯಬೇಕು. ದುಡಿದು ಸಂಪಾದಿಸಿದ್ದನ್ನು ಔದಾರ್ಯದಿಂದ ಖರ್ಚು ಮಾಡತಕ್ಕದ್ದು. ಅಷ್ಟೇ ಅಲ್ಲ. ವಿತ್ತದ ಜೊತೆಗೆ ಕಾಲ ಹಾಗೂ ಶಕ್ತಿ ಸಾಮಥ್ರ್ಯಗಳನ್ನೂ ಸಜ್ಜನಿಕೆಯ ಅರ್ಜನೆಗೆ ವಿನಿಯೋಗಿಸತಕ್ಕದ್ದು. ಹೆರಾಕ್ಲೀಸನನ್ನು ಮಾದರಿಯಾಗಿಯೂ ಮೇಲ್ಪಂಕ್ತಿಯಾಗಿಯೂ ಸಲಹೆಗಾರನಾಗಿಯೂ ಸಂರಕ್ಷಕನಾಗಿಯೂ ಇರಿಸಿಕೊಂಡರೆ ಜೀವನ ಸುಗಮ, ಕ್ಷೇಮ, ಸಾರ್ಥಕ. ಬಡತನ ಕುರೂಪಗಳಿಗಾಗಿ ಕೊರಗಬೇಕಾದ್ದಿಲ್ಲ. ವಿಜಯ ಗಳಿಸಿದ ಎಷ್ಟೋ ಜಟ್ಟಿಗಳು ಐಶ್ವರ್ಯವಂತರಲ್ಲ, ಲಕ್ಷಣವಂತರಲ್ಲ. ಪ್ರಾಮಾಣಿಕತೆ ಶ್ರದ್ಧೆ ಸಾಹಸ ಹೆಚ್ಚೇ ಹೊರತು ಮಿಕ್ಕದಾವುದೂ ಅಲ್ಲ. ಈ ಉಪದೇಶದಲ್ಲಿ ಹೊಸದಾದ್ದು ಏನೂ ಇಲ್ಲ, ಗ್ರೀಕರಲ್ಲಿ ಮೊದಲಿನಿಂದ ಸಾಂಪ್ರದಾಯಿಕವಾಗಿ ಬಂದದ್ದೇ ಅಧಿಕ. 

ವಿಜಯಗೀತಗಳ ರಚನೆಯಲ್ಲಿ ಸರಳವೂ ಸುಲಭವೂ ಆದ ಕ್ರಮವೊಂದನ್ನು ಈತ ತಿರುತಿರುಗಿ ಪ್ರತಿಪಾದಿಸುತ್ತಾನೆ ; ನವೀನ ವಿನ್ಯಾಸವನ್ನು ನಿರ್ಮಿಸುವ ತೊಂದರೆಗೆ ಪಕ್ಕಾಗಲು ಒಪ್ಪುವುದಿಲ್ಲ. ಸೈರಕ್ಯೂಸಿನ ಸರ್ವಾಧಿಕಾರಿ ಹೈರೋವನ್ನು ಕುರಿತ ಪ್ರಗಾಥದಲ್ಲಿ ಅವನ ಕುದುರೆ ಫೆರೆನಿಕಾಸ್ (ಜಯ ತರುವವ) ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆಯಿತು. ಆ ಸಂತಸ ಘಟನೆಯ ವರ್ಣನೆಯೇ ಈ ಪ್ರಗಾಥದ ವಸ್ತು. ಪ್ರಾರಂಭದಲ್ಲಿ ಹೈರೊ ಮತ್ತು ಪೆರೆನಿಕಾಸ್‍ಗಳ ಹೊಗಳಿಕೆ ಆಮೇಲೆ ಪ್ಯಾಂಟಲಸ್ ಮತ್ತು ಪೀಲಾಪ್ಸ್‍ರ ಪುರಾಣ ಕಥೆ, ಪೀಲಾಪ್ಸ್ ರಥ ಹರಿಸುವ ಸ್ಪರ್ಧೆಯಲ್ಲಿ ಈನೊಮಉಸ್ಸನ್ನು ಸೋಲಿಸಿ ಅವನ ಕುಮಾರಿ ಹಿಪ್ಪೊಡಮಯಾಳನ್ನು ವರಿಸಿದ್ದು, ಪುನಃ ಹೈರೊವಿನ ಪ್ರಶಂಸೆ, ರಥದ ಸ್ಪರ್ಧೆಯಲ್ಲೂ ಅವನಿಗೆ ವಿಜಯ ಸಲ್ಲಲಿ ಎಂಬ ಆಶೋತ್ತರ, ಅವನು ಗೆದ್ದರೆ ಸ್ವತಃ ತಾನೇ ಅದರ ಪ್ರಗಾಥ ಬರೆದುಕೊಡುವ ಭರವಸೆ-ಇವು ಮುಖ್ಯ ವಿಷಯಗಳು. ಇತರ ನಾನಾ ಉಪವಿಷಯಗಳು ಸಮಯ ಸಂದರ್ಭಕ್ಕನುಗುಣವಾಗಿ ಬಂದು ಸೇರಿಕೊಳ್ಳುತ್ತವೆ. ದೊರೆಯ ಕಾಯಿಲೆ, ಪರಲೋಕದ ವಿಚಾರ, ಪಾಪಕ್ಕೆ ತಕ್ಕ ಶಿಕ್ಷೆ, ಎಟ್ನಾ ಜ್ವಾಲಾಮುಖಿಯ ಭಾರೀ ಸ್ಫೋಟನ, ದೇವತೆಗಳ ಸ್ತುತಿ-ಮುಂತಾದುವುಗಳಿಂದ ಕಾವ್ಯ ಸುಪುಷ್ಟವಾಗಿದೆ. 
ಛಂದಸ್ಸಿನ ದೃಷ್ಟಿಯಿಂದ ಪಿಂಡರನ ಪ್ರಗಾಥ ಕುತೂಹಲಕರವಾದದ್ದು, ಜಟಿಲವಾದದ್ದು, ಬಿಗಿ ಬಿಕ್ಕಟ್ಟಿನಿಂದ ಕೂಡಿದ್ದು. ಅದನ್ನು ಅನುಕರಿಸಿಹೋದ ಎಲ್ಲ ಆ ಮೇಲಣ ಕವಿಗಳೂ ಕಷ್ಟಪಟ್ಟು ಕಂಗೆಟ್ಟಿದ್ದಾರೆ, ನಿಟ್ಟುಸಿರು ಬಿಟ್ಟಿದ್ದಾರೆ. ಹತಾಶೆಯಿಂದ ಕುಗ್ಗಿ ಹೋಗಿದ್ದಾರೆ. ಪ್ರಗಾಥದ ಭಾಗ ಮೂರು, ಒಂದೊಂದಕ್ಕೂ ಮೂರು ಮೂರು ಪಂಕ್ತಿ ಗುಚ್ಛಗಳು. ಅವುಗಳ ಹೆಸರು ಸ್ಟ್ರೊಫಿ, ಆಂಟಿಸ್ಟ್ರೊಫಿ, ಈಪೋಡ್. ಸ್ಟ್ರೊಫಿ ಆಂಟಿಸ್ತ್ರೊಫಿ ಎರಡೂ ಒಂದೇ ಉದ್ದದವು. ಈಪೋಡ ಮಾತ್ರ ಬೇರೆ, ಗಣಪಂಕ್ತಿ, ಅವುಗಳ ಪುನರುಕ್ತಿ, ಸಾಮ್ಯ, ವೈಶಮ್ಯ ಮುಂತಾದ ವಿಚಾರಗಳು ಬಿಡಿಸಲಾರದ ಸಮಸ್ಯೆಯಾಗಿವೆ. ನರ್ತನದ ಮುನ್ನಡೆ ಹಿನ್ನಡೆ ನಿಲುಗಡೆಗಳ ಹೊಂದಾಣಿಕೆಯೂ ಗಾಯನ ಸಾಹಿತ್ಯಗಳೊಡನೆ ಸೇರಿಕೊಂಡು ಪ್ರಗಾಥವನ್ನು ಅತ್ಯಪೂರ್ವ ಕಲಾಪ್ರಭೇದವನ್ನಾಗಿಸಿದೆ. 

ಉಕ್ಕಿ ಹರಿಯುವ ಗಂಭೀರ ವಾಣಿ, ತೂಕ ಘನತೆ ಕೂಡಿಕೊಂಡ ಪದಕೋಶ, ಪುರಾಣ ಕಥೆಯ ಗಹನ ಕಲ್ಪನೆಗಳ ಆವರಣ, ಸಾಧಾರಣವಾಗಿ ಕೆಳಕ್ಕಿಳಿಯದ ಮಹೋನ್ನತ ಶೈಲಿ, ಕಾವ್ಯ ಸಂಗೀತಗಳ ಅದ್ಭುತ ಮಿಶ್ರಣ, ಎಲ್ಲೆಲ್ಲೂ ಎದ್ದು ಹೊಳೆಯುವ ತನ್ನತನ-ಈ ಗುಣಗಳಿಂದ ಪಿಂಡರ್ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಅನಂತರ ಬಂದ ಕವಿವರ್ಯರನೇಕರು ಪಿಂಡರನಂಥ ಪ್ರಗಾಥ ವಿರಚಿಸಲು ಬಹಳ ಪ್ರಯಾಸ ಪಟ್ಟಿದ್ದಾರೆ. ಹಾರೆಸ್, ಕ್ವಿಂಟಲಿಯನ್, ಕೌಲಿ, ಡ್ರೈಡನ್, ಗ್ರೇ-ಇತ್ಯಾದಿ ಹತ್ತೆಂಟು ಕವಿಗಳು ಇವನ ಅನುಕರಣೆ ಮಾಡಿದ್ದಾರೆ. ಅವರೆಲ್ಲರ ವಿಷಯದಲ್ಲೂ ಪಂಡಿತ ಶ್ರೇಷ್ಠನೊಬ್ಬ ಪೋಪ್ ಕವಿಗೆ ಹೇಳಿ ಮಾತು ಒಪ್ಪುತ್ತದೆ. "ಅಯ್ಯಾ, ನಿನ್ನದು ಅಂದಚಂದದ ಕಾವ್ಯ ; ಆದರೆ ಅದನ್ನು ಹೋಮರಿಕ್ ಎಂದು ಮಾತ್ರ ಕರೆಯಬೇಡ"; ಸ್ವಿಫ್ಟ್ ಕಟ್ಟಿದ ಒಂದು ಪಿಂಡಾರಿಕ್ ಪ್ರಗಾಥವನ್ನು ಕುರಿತು ಡ್ರೈಡನ್ ಹೀಗೆ ಅಣಕಿಸಿದ: `ಬಂಧು ಸ್ವಿಸ್ಟ್, ನೀನೆಂದೆಂದೂ ಕವಿಯಾಗಲಾರೆ.'
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ